Thursday, August 30, 2012

ಆರ್.ವಿ.ನಮಿತ ಜೊತೆ ಚಂದ್ರಶೇಖರ.ಕೆ {ಕಲ್ಯಾಣೋತ್ಸವ}

Posted by ffff


ಕಲ್ಯಾಣೋತ್ಸವ
30 ಹಾಗೂ 31 ಮೇ 2012 ರಂದು ನಡೆದ ವಿಭಿನ್ನ ರೀತಿಯ ವಿನೂತನ ಮದುವೆಯ ಛಾಯಾಚಿತ್ರಗಳು.
ಸ್ಥಳ: ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪ, ಆನೇಕಲ್ ನಗರ, ಬೆಂಗಳೂರು-562106.

ವಿಭಿನ್ನ ಮದುವೆಯ ವಿನೂತನ ಕಾರ್ಯಕ್ರಮಗಳ ಪಟ್ಟಿ

1) ನಾವಿಬ್ಬರೂ ಕಣ್ಣನ್ನು ದಾನ ಮಾಡುವುದು ಹಾಗೂ ಎಲ್ಲರಿಗೂ ದಾನ ಮಾಡಿ ಎಂದು ಕೋರುವುದು.
ಮದುವೆಯಲ್ಲಿ ವಧು-ವರರಾದ (ಆರ್.ವಿ.ನಮಿತ ಜೊತೆ ಚಂದ್ರಶೇಖರ.ಕೆ) ನಾವಿಬ್ಬರೂ ನೇತ್ರದಾನ ಮಾಡಿದ್ದರ ಜೊತೆಗೆ 127 ಮಂದಿ ನೇತ್ರದಾನ ಮಾಡಿದ್ದು ವಿಶೇಷ.
ನೇತ್ರದಾನಕ್ಕೆ ಸಹಾಯ ಮಾಡಿದ್ದು ಜಿಗಣಿಯ ಹೊಸಬೆಳಕು ಟ್ರಸ್ಟ್ ನ ಜಿಗಣಿ ರಾಮಕೃಷ್ಣ ಹಾಗೂ ರಾಷ್ಟ್ರಶಕ್ತಿ ಕೇಂದ್ರದ ಜಗದೀಶ ಪಾಟೀಲರು.

2) ಸಾಧ್ಯವಾದಷ್ಟು ಹೂ ಬಳಕೆ ಕಡಿಮೆ ಮಾಡಿ ಹಣ್ಣುಗಳಿಂದ ಅಲಂಕರಿಸುವುದು.
ಪೂಜೆಗೆ ಹೊರತುಪಡಿಸಿ ಬೇರಾವುದಕ್ಕೂ ಹೂ ಬಳಕೆ ಮಾಡದೆ ಸುಮಾರು 2 ಟನ್ ಬಾಳೆಹಣ್ಣು, ಏಳನೀರು, ಸೇಬು, ಬಿಳಿ ಮತ್ತು ಕಪ್ಪು ದ್ರಾಕ್ಷಿ, ದಾಳಿಂಬೆ, ಮೂಸಂಬಿ, ಕಿತ್ತಲೆ, ಮಾವು, ಅನಾನಸ್, ಕಲ್ಲಂಗಡಿ ಹಣ್ಣು, ಕರಬೂಜ ಹಣ್ಣು,  ಹಲಸು ಮುಂತಾಂದ ಹಣ್ಣುಗಳಿಂದ ಕಲ್ಯಾಣ ಮಂಟಪವನ್ನು  ಅಲಂಕರಿಸಿದ್ದು. ಹಣ್ಣುಗಳು  ಅಲಂಕಾರದ ಜೊತೆಗೆ ಆಹಾರವಾಗಿದ್ದು ವಿಶೇಷವಾಗಿತ್ತು.

3) ಜಾನಪದ ಶೈಲಿಯ ಮದುವೆಗೆ ಮನ್ನಣೆ.
ಕಲ್ಯಾಣ ಮಂಟವನ್ನು ರಂಗೋಲಿ ಬಿಡಿಸಿದ ಮಡಿಕೆಗಳು, ದಾನ್ಯಗಳಲ್ಲಿ ಅರಳಿಸಿದ ರಂಗೋಲಿ, ಹಣ್ಣುಗಳ ಅಲಂಕಾರ, ತೆಂಗು, ಮಾವು, ಬೇವು, ಬಾಳೆಯಿಂದ ಅಲಂಕಾರದ ಜೊತೆ ಜಾನಪದ ಶೈಲಿಯ ಉಡುಪು, ಸಾಂಪ್ರದಾಯಿಕ ವೈಚಾರಿಕ ಪದ್ದತಿಗಳ ವಿವಾಹ ವಿಶೇಷ.
ಗೌರೇನಹಳ್ಳಿ  ಗ್ರಾಮದ ಶ್ರೀ ಮುನಿರಾಮುರವರ ಕೈಚಳಕದಲ್ಲಿ ಮೂಡಿ ಬಂದ ರಂಗೋಲಿ ಬಿಡಿಸಿದ ಮಡಿಕೆಗಳು, ದಾನ್ಯಗಳಲ್ಲಿ ಅರಳಿಸಿದ ರಂಗೋಲಿ, ಹಣ್ಣುಗಳ ಅಲಂಕಾರ ತುಂಬಾ ಅದ್ಬುತವಾಗಿತ್ತು.

4) ಮದುವೆಯ ಹಾಗೂ ಆರತಕ್ಷತೆಯಂದು ವಿಶೇಷವಾಗಿ ಅನಾಥಾಶ್ರಮದ ಮಕ್ಕಳಿಗೆ ಭೋಜನ ವ್ಯವಸ್ಥೆ.

ಆನೇಕಲ್ ನಗರದ ಶ್ರೀ ವಿ.ರಾಮಕೃಷ್ಣರ ಜೀವಿಕ (ಜೀತ ವಿಮುಕ್ತಿ ಕೇಂದ್ರ)  ಸ್ವಯಂ ಸೇವಕ ಸಂಸ್ಥೆಯ ಸುಮಾರು 35 ಜನ ಬಡ ಜೀತ ವಿಮುಕ್ತ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದು ವಿಶೇಷ.

5) ಉಡುಗೊರೆ (ಹಣ)ಯನ್ನು ಶಿಕ್ಷಣವಂಚಿತ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಮೀಸಲಿಡುವುದು.

ಮದುವೆಯಲ್ಲಿ ಭಾಗವಹಿಸಿದ ಅತಿಥಿಗಳಿಂದ ಸಂಗ್ರಹವಾದ ಉಡುಗೊರೆ ಹಣವನ್ನು ಆಗಸ್ಟ್ 15 ರಂದು ಕಲಾಸಂತೆ ಜೊತೆಗೆ ವಿಧ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆನೇಕಲ್ ನಗರದ ಸ್ವರ್ಣಮಹೋತ್ಸವ ಭವನದ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ವೇದಿಕೆಯಲ್ಲಿ ನಮ್ಮದೇ ಸ್ವಯಂಸೇವಕ ಸಂಸ್ಥೆಯಾದ ಬಾಲವನ (ಇದು ಮಕ್ಕಳ ಲೋಕ) ಹಾಗೂ ಹೊಸಬೆಳಕು ಟ್ರಸ್ಟ್ ಜಿಗಣಿ ರಾಮಕೃಷ್ಣ ನೇತೃತ್ವದಲ್ಲಿ ಆನೇಕಲ್ ತಾಲ್ಲೂಕಿನ 74 ಶಾಲೆಯ 148 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 8 ಜನ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವಿಶೇಷವೆಂದರೆ ಬೆಳಿಗ್ಗೆ 9 ಗಂಟೆಗೆ ಶುರುವಾಗಿ ರಾತ್ರಿ 9 ಗಂಟೆಯವರೆಗೆ ಸತತವಾಗಿ 12 ಗಂಟೆಗಳ ಕಾಲ ನಡೆಸಿದ್ದು, ಕಾರ್ಯಕ್ರಮದ ಮಧ್ಯಭಾಗದಲ್ಲಿ ಇಬ್ಬರು ಅಂಧರಿಂದ ದೀಪ ಬೆಳಗಿಸಿದ್ದು. ಎಂಟು ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಸಮಾಜ ಸೇವಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, 111 ಮಂದಿ ನೇತ್ರದಾನ ನೋಂದಣಿ ಮಾಡಿಸಿದ್ದು, 74 ಶಾಲೆಗಳ 148 ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದು, ಸಾಂಝಿ ಕಲಾಲೋಕದ ಎಸ್.ಎಫ್.ಹುಸೇನಿರವರು 60 ಜನ ಮಹಿಳೆಯರಿಗೆ ಸಾಂಝಿ ರಂಗೋಲಿ ತರಬೇತಿ ನೀಡಿದ್ದು, ಸ್ಪರ್ಧಾವಿಜೇತ ಪತ್ರಿಕೆಯ ಸಂಪಾದಕರಾದ ಕೆ.ಎಂ.ಸುರೇಶ್ ರವರು ವಿಧ್ಯಾರ್ಥಿಗಳ ಮುಂದಿನ ಭವಿಷ್ಯದ ಬಗ್ಗೆ ದಿಕ್ಸೂಚಿ ಭಾಷಣ ಅಧ್ಬುತವಾಗಿತ್ತು. ಅಂಧ ಕಲಾವಿದ ಶಿವಕುಮಾರ ಮಿಮಿಕ್ರಿ ಮಾಡಿ ನಗಿಸಿದ್ದು, ೧೦ ವರ್ಷದ ಪೋರ ಆಕಾಶ ನಾಯಕ ತಬಲ ವಾದನದ  ಜೊತೆಗೆ ದೇಶದ ಸ್ವತಂತ್ರ್ಯದ ನಾಯಕರ ಬಗ್ಗೆ ಭಾಷಣ ಮಾಡಿದ್ದು, ಶಾಲಾ ಮಕ್ಕಳು ಯೋಗ ಪ್ರದರ್ಶಿಸಿದ್ದು. ಕಾರ್ಯಕ್ರಮದಲ್ಲಿ ಆನೇಕಲ್ ತಾಲ್ಲೂಕಿನ ತಹಸೀಲ್ದಾರರಾದ ಹೆಚ್.ಎನ್.ಶಿವೇಗೌಡರು ಭಾಗವಹಿಸಿ ಕಲಾಕೃತಿಗಳನ್ನು ವೀಕ್ಷಿಸುವುದರ ಜೊತೆಗೆ ಸ್ವಯಂವೈದ್ಯ ಆರ್ಯುವೇದ ಪಂಡಿತ ಶ್ರೀನಿವಾಸ್‌ರವರಿಂದ ಗಿಡಮೂಲಿಕೆಗಳ ಔಷಧಿ ಗುಣಗಳ ಮಾಹಿತಿ ಪಡೆದುಕೊಂಡರು. ಕಲಾಸಂತೆಯಂತಹ ವಿನೂತನ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದ ಬಾಲವನ ಹಾಗೂ ಹೊಸಬೆಳಕು ಟ್ರಸ್ಟ್ ಸಂಸ್ಥೆಗಳನ್ನು ಶ್ಲಾಘಿಸಿದರು.

6) ವಾದ್ಯಗೋಷ್ಠಿ (ಆರ್ಕೆಸ್ರ್ಟಾ) ಬದಲಿಗೆ ಜನಪದ ಶೈಲಿಯ ಕಾವ್ಯ-ಗಾನ-ಕುಂಚ ಕಲೆಯನ್ನು ಪ್ರದರ್ಶಿಸುವುದು.

ಆನೇಕಲ್ ತಾಲ್ಲೂಕಿನ ಯುವ ಸಾಹಿತಿ/ಕವಿ, ಕವಿ,ಕವಿಯತ್ರಿಗಳ ರಚನೆಯ 9 ಕಾವ್ಯಗಳನ್ನು ಪಡೆದು ನಮ್ಮದೇ ತಾಲ್ಲೂಕಿನ ಗಾಯಕರನ್ನು ಬಳಸಿ ಕಾವ್ಯಗಳಿಗೆ ರಾಗ ಸಂಯೋಜನೆ ಮಾಡಿಸಿ, ಮದುವೆಯ ಆರತಕ್ಷತೆಯ ವೇದಿಕೆಯಲ್ಲಿ ಕವಿಗಳಿಂದ ಕಾವ್ಯಗಳನ್ನು ವಾಚನ ಮಾಡಿಸಿ ತದನಂತರ ಕಾವ್ಯಗಳನ್ನು ಗಾಯಕರಿಂದ ಗಾಯನ ಮಾಡಿಸುವುದರ ಜೊತೆಗೆ ಭಾವ ಗೀತೆಗೆ ತಕ್ಕ ಭಾವಚಿತ್ರಗಳನ್ನು ಖ್ಯಾತ ತಂತ್ರಜ್ಞ, ಕವಿ, ಕಲಾವಿದ ಶ್ರೀ ಬಾಗೂರು ಮಾರ್ಕಂಡೇಯ ರವರು ವೇದಿಕೆಯಲ್ಲಿ ಚಿತ್ರ ರಚಿಸುವಂತ ವಿನೂತನ ಕಾರ್ಯಕ್ರಮವನ್ನು ರೂಪಿಸಿದ್ದು. ಹಾಗೂ ಸಲಹೆ, ಸೂಚನೆ ನೀಡಿದಂತಹ ಕವಿ, ಕಲಾವಿದರು, ಆಪ್ತ ಗಣ್ಯರಿಗೆ ಶಾಲು, ಗಂಧದ ಹಾರ ಮತ್ತು ರಕ್ತದಾನ, ನೇತ್ರದಾನದ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸುವಂತ ಕಾರ್ಯಕ್ರಮ ವಿಭಿನ್ನವಾಗಿತ್ತು.
ಕಾವ್ಯ-ಗಾನ-ಕುಂಚ ಕಾರ್ಯಕ್ರಮಕ್ಕೆ ಕಾವ್ಯಗಳನ್ನು ನೀಡಿದ ಕವಿ, ಕವಿಯತ್ರಿಗಳು.

1) ಆದೂರು ಪ್ರಕಾಶ ರವರ "ಜೋಗುಳ ಹಾಡು" 2) ಮಹೇಶ್ ಊಗಿನಹಳ್ಳಿರವರ "ಅವ್ವ ನನ್ನ ಜೀವದ ಜೀವ" 3) ಆನೇಕಲ್ ಬೈರಪ್ಪರವರ "ಎಲ್ಲೋ ನೋಡಿದ ನೆನಪು" 4) ತಾ.ಸಿ. ತಿಮ್ಮಯ್ಯ ರವರ "ಮೌನದ ಹಾಡು" 5) ಮಡಿವಾಳ ಅಮರೇಶ್ ರವರ " ಬಾರೋತಮ್ಮ ಬಾರೋ ಅಣ್ಣ" 6) ಹೆಬ್ಬಗೋಡಿ ಕೃಷ್ಣಪ್ಪನವರ "ಏನ ಬೇಡಲಿ ತಂದೆ" 7) ಶ್ರೀಮತಿ ವಿಶಾಲಾರಾಧ್ಯ ರವರ " ನನ್ನ ನಿನ್ನ ಮೈತ್ರಿ" 8) ಶ್ರೀಮತಿ ಶ್ರೀವಲ್ಲಿ ಶೇಷಾಧ್ರಿ ರವರ "ನಮ್ಮೀರ್ವರ ಓಲವು" 9) ಶ್ರೀಮತಿ ಮಂಜುಳ ರವರ "ಸುಗ್ಗಿ, ಸುಗ್ಗಿಹಾಡು".

7) ಕಲ್ಯಾಣಮಂಟಪದಲ್ಲಿ ಜನಜಾಗೃತಿ ಮಾಹಿತಿ ಫಲಕಗಳನ್ನು  ಪ್ರದರ್ಶಿಸಿ ಜಾಗೃತಿ ಮೂಡಿಸುವುದು.

ಕಲ್ಯಾಣ ಮಂಟಪದಲ್ಲಿ ಜನಜಾಗೃತಿ ಮೂಡಿಸುಂತಹ ಕಲೆ, ಜ್ಞಾನ, ತಂತ್ರಜ್ಞಾನ, ಶಿಕ್ಷಣ, ರಕ್ತದಾನ, ನೇತ್ರದಾನ, ಮಳೆನೀರು ಕೊಯ್ಲು, ಸ್ವಯಂವೈದ್ಯ ಪದ್ದತಿಯ  ಜನಜಾಗೃತಿಯ ಮಾಹಿತಿ ಫಲಕಗಳನ್ನು ಪ್ರದರ್ಶಿಸಲಾಯಿತು.

8) ಫಲದ ಬದಲು ಪರಿಸರ ಸ್ನೇಹಿ ಸಸಿಗಳನ್ನು ತಾಂಬೂಲವಾಗಿ ನೀಡುವುದು.

 ಸಾಮಾನ್ಯವಾಗಿ ಮದುವೆ ಇನ್ನಿತರೆ ಸಮಾರಂಭಗಳಲ್ಲಿ ತಾಂಬೂಲದ ರೀತಿಯಲ್ಲಿ ಹಣ್ಣು, ತೆಂಗಿನಕಾಯಿ ನೀಡುವುದು ಸಾಮಾನ್ಯ. ಆದರೆ ಕಲ್ಯಾಣೋತ್ಸವದಲ್ಲಿ ರಾತ್ರಿ ಆರತಕ್ಷತೆಯಲ್ಲಿ ಭಾಗವಹಿಸಿದ ಸುಮಾರು 2600 ಜನ ಅತಿಥಿಗಳಿಗೆ ಬೆಂಗಳೂರಿನ ಧನ್ವಂತರಿ ವನದಿಂದ ತರಿಸಿದ ಸುಮಾರು 50 ಕ್ಕೂ ಹೆಚ್ಚು ರೀತಿಯ ಆಯುರ್ವೇದ ಗಿಡಗಳನ್ನು ವಿತರಿಸಿದ್ದು ಗಿಡಗಳೆಲ್ಲ ರಾತ್ರಿಯೇ ಖಾಲಿಯಾದದ್ದು ವಿಶೇಷವಾಗಿತ್ತು.

ಪರಿಸಿರ ಸ್ನೇಹಿ ಸಸಿಗಳನ್ನು ಒದಗಿಸಿಕೊಟ್ಟಿದ್ದು :

ಬೆಂಗಳೂರಿನಲ್ಲಿ ವಾಸವಾಗಿರುವ ಬಿ.ಟಿ.ಎಂ ಲೇಔಟ್ ನ ಅರಣ್ಯ ವಿಭಾಗದಲ್ಲಿ ರೇಂಜರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ವಿ.ಗಣೇಶ್ ರವರು ನಮ್ಮ ಮದುವೆಯ ಕಲ್ಪನೆಯನ್ನು ಕೇಳಿ ನನ್ನ ಕಡೆಯಿಂದ ನಿಮಗೆ ಆಯುರ್ವೇದ ಸಸಿಗಳನ್ನು ಉಡುಗೊರೆಯಾಗಿ ನೀಡುವೆ ಎಂದು 1500 ಸಸಿಗಳನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಧನ್ವಂತರಿ ವನದಿಂದ ಒದಗಿಸಿಕೊಟ್ಟರು. ಹಾಗೂ ವಣಕನಹಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ವೆಂಕಟೇಶ್ ರವರು ಸಹ ನಿಮ್ಮ ಕಲ್ಯಾಣೋತ್ಸವಕ್ಕೆ ನಮ್ಮ ಕೊಡುಗೆಯೆಂದು ಚಂದಾಪುರ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಬೈಸಪ್ಪನವರಿಂದ ಮಾವು, ಬೇವು, ಕರಿಬೇವು, ಬೆಟ್ಟದನೆಲ್ಲಿ, ಹೊಂಗೆ ಮುಂತಾದ 600 ಸಿಸಿಗಳನ್ನು ಕೊಡಿಸಿದರು. ಜೊತಗೆ ಹಾಲ್ದೇನಹಳ್ಳಿ ಗ್ರಾಮದ ವಾಸಿಯಾದ ನಮ್ಮ ಗೆಳೆಯರಾದ ಮಂಜಣ್ಣನವರು ತಮ್ಮ ನರ್ಸರಿಯಿಂದ ತುಳಸಿ, ಅಮೃತಬಳ್ಳಿ, ದಾಸವಾಳ, ಮಲ್ಲಿಗೆ, ಮಧುನಾಷಿನಿ ಮುಂತಾದ ವಿವಿಧ ಬಗೆಯ 500 ಗಿಡಗಳನ್ನು ಉಚಿತವಾಗಿ ಒದಗಿಸಿಕೊಟ್ಟರು. ಇವರುಗಳ ಪರಿಸಿರ ಪ್ರೇಮ ಅಗಣ್ಯವಾದದ್ದು. ನಮ್ಮ ನಿಮ್ಮಲ್ಲೂ  ಇದೇ ರೀತಿಯ ಪರಿಸರ ಪ್ರೇಮ ಅಡಗಿರುತ್ತದೆ ಅದನ್ನು ಹುಡುಕಬೇಕಷ್ಟೆ! ಅಲ್ಲವೇ ಗೆಳಯರೇ?

9) ಚಿಣ್ಣರಿಗಾಗಿ ಕಾಗದದಲ್ಲಿ ಚಿತ್ತಾರ ಮೂಡಿಸುವ ಕಲೆಗಾರ(ಮಾಸ್ಕ್) ಸಾಂಝಿ ಕಲಾವಿದ ಎಸ್.ಎಫ್.ಹುಸೇನಿ. 

ಎಸ್.ಎಫ್.ಹುಸೇನಿರವರು ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದ ಸುಮಾರು 80 ಜನ ಪುಟಾಣಿಗಳಿಗೆ ಅವರ ಕೈಯಲ್ಲೇ ಬಣ್ಣ ಬಣ್ಣದ ಕಾಗದ (ಪೇಪರ್) ಮುಖವಾಡ (ಮಾಸ್ಕ್) ಗಳನ್ನು ತಯಾರಿಸುವುದನ್ನು ಕಲಿಸಿಕೊಡುವುದರ ಜೊತೆಗೆ ಮಕ್ಕಳಿಗೆ ಸಾಂಝಿ ಕಲೆಯನ್ನು ತಿಳಿಸಿದರು.

ಬೆಂಗಳೂರಿನಲ್ಲಿ ನೆಲೆಸಿರುವ ಎಸ್.ಎಫ್.ಹುಸೇನಿ (ಸಯ್ಯದ್ ಫಕ್ರುದ್ದೀನ್ ಹುಸೇನಿ)ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ (ಬ್ಲಫ್)ನವರು. ಒಡನಾಟವೆಲ್ಲ ಮೈಸೂರಿನಲ್ಲೇ ಹೆಚ್ಚು. ಸಾಂಝಿ ರಂಗೋಲಿ, ಸಾಂಝಿ ಮುಖವಾಡ ಹಾಗೂ ಗಣೇಶ ಹಾಗೂ ಇನ್ನಿತರೆ ಏಕರೇಖಾ ಚಿತ್ರಗಳನ್ನು ರಚಿಸುವುದು ಇವರ ಅದ್ಬುತ ಕಲೆ.

ನಮ್ಮ ಕರ್ನಾಟಕದಲ್ಲಿಯೂ ಸಾಂಝಿಕಲೆಯನ್ನು ಬಳಸುತ್ತಾರೆ. ಯಾರಿಗೂ ಇದರ ನಿರ್ದಿಷ್ಟ ಹೆಸರು ತಿಳಿದಿಲ್ಲ. ಮದುವೆ ಮುಂಜಿಗೆ ಮನೆ, ಮಂಟಪವನ್ನು ಸಿಂಗಾರ ಮಾಡಲು ಇದನ್ನು ಬಳಸುತ್ತಾರೆ. ಕುಮುಟಾ, ಕಾರವಾರ, ಶಿರಸಿ ಕಡೆಗಳಲ್ಲಿ ಅದನ್ನು ಪರ್ಪರೆ ಎಂದು ಕರೆಯುತ್ತಾರೆ. ರಾಜ್ಯದ ಇತರೆಡೆಗಳಲ್ಲಿಯೂ ಇದನ್ನು ವ್ಯಾಪಕವಾಗಿ ಬಳಸುತ್ತಾರೆ. ಕಲೆ ಯಾರಿಗೂ ಸ್ವಂತದ್ದಲ್ಲ. ಈ ಮಾತು ಹುಸೇನಿಯವರಿಗೆ ಒಪ್ಪುತ್ತದೆ. ಅವರ ತಮಗೆ ಗೊತ್ತಿರುವ ಈ ಕಲೆಯನ್ನು ಇತರರಿಗೆ ಹೇಳಿ ಕೊಡುವ
ವಿಶಾಲ ಮನೋಭಾವವುಳ್ಳವರು. ಸಾಂಝಿ ಎನ್ನುವುದು ಬಾನೆತ್ತರಕ್ಕೆ ಬೆಳೆಯಬೇಕೆನ್ನುವುದು ಅವರ ಆಶಯ. ಅದಕ್ಕಾಗಿ ಹಳ್ಳಿಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಉಚಿತವಾಗಿ ತರಬೇತಿ ಕೊಡುತ್ತಾರೆ. ತಮಗೆ ತಿಳಿದಿರುವ ಈ ಕಲೆಯನ್ನು ಆಸಕ್ತರಿಗೆ ಕಲಿಸಿಕೊಡಲು ಅವರಿಗೆ ಅದೇನೋ ಖುಷಿ ಒಟ್ಟಿನಲ್ಲಿ ಈ ಕಲೆ ತನ್ನ ಸ್ವಂತ ಹೆಸರಿನಲ್ಲಿ ಪ್ರಚಾರಕ್ಕೆ ಬರಬೇಕು, ಉಳಿಯಬೇಕು ಎನ್ನುವುದು ಅವರ ಮಾತು.

10) ಸ್ವಯಂವೈದ್ಯ ಪದ್ದತಿಯ ಬಗ್ಗೆ ಮಾಹಿತಿ ಹಾಗೂ ಪ್ರತ್ಯಕ್ಷಿಕೆ. 

ಎಲೆಮರೆ ಕಾಯಿಯಂತೆ ಹಲವಾರು ದಶಕಗಳಿಂದ ಆಯುರ್ವೇದ ಪದ್ದತಿಯಿಂದ ಖಾಯಿಲೆಗಳನ್ನು ಗುಣಪಡಿಸುತ್ತಿರುವ ಸುಮಾರು ೮೦ ವರ್ಷ ವಯಸ್ಸಿನ ಆನೇಕಲ್ ನಗರದ ವಾಸಿಯಾದ ಶ್ರೀನಿವಾಸ್ ರವರು ತಮ್ಮ ಮುಂದಿನ ಪೀಳಿಗೆಗೆ ಆಯುರ್ವೇದ ಪದ್ದತಿಯು ಮುಂದುವರೆಯಲಿ ಎಂಬ ಸದುದ್ದೇಶದಿಂದ ಸಾಮಾನ್ಯ ಖಾಯಿಲೆಗಳಾದ ಜ್ವರ, ತಲೆನೋವು, ಕೆಮ್ಮು, ನೆಗಡಿ, ಮೈ, ಕೈಕಾಲು ನೋವುಗಳಿಗೆ ಉಚಿತವಾಗಿ ಔಷಧಿಯನ್ನು ನೀಡುವುದರ ಜೊತೆಗೆ ತಮ್ಮ ತಮ್ಮ ಮನೆಗಳಲ್ಲಿ ಹೇಗೆ ಸ್ವಯಂವೈದ್ಯ ಮಾಡಿಕೊಂಡು ತಮ್ಮ ಆರೋಗ್ಯ ಕಪಾಡಿಕೊಳ್ಳುವುದು ಎಂದು ಮನೆ ಮದ್ದು ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ ಅತಿಥಿಗಳಿಗೆ ತಿಳಿಸಿಕೊಡುವುದರೊಂದಿಗೆ ಜೀರಿಗೆ ಕಷಾಯವನ್ನು ನೀಡಲಾಯಿತು.

11) ಸಾಹಿತ್ಯಾಸಕ್ತರಿಗೆ ತಾಲ್ಲೂಕಿನ ಸಾಹಿತಿಗಳ ಪ್ರಕಟಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದು.

ಆನೇಕಲ್ ತಾಲ್ಲೂಕಿನ ಸಾಹಿತಿಗಳ ಕಥೆ, ಕವಿತೆ, ಕಾವ್ಯಗಳನ್ನು ರಚಿಸಿ ಪ್ರಕಟಿಸಿರುವ ಪುಸ್ತಕಗಳನ್ನು ಲೇಖಕರಿಂದ ಸಂಗ್ರಹಿಸಿ. ಅಂತಹ ಸಾಹಿತ್ಯಾಸಕ್ತಿಯ ಅತಿಥಿಗಳಿಗೆ ಉಡುಗೊರೆ ನೀಡುವುದರ ಜೊತೆಗೆ ಯುವ ಸಾಹಿತಿಗಳನ್ನು ಪರಿಚಯಿಸಲಾಯಿತು.

1) ಉದಯ ಟಿ.ವಿಯ ವರದಿಗಾರರಾದ ದನಗೂರು ಪರಶಿವ ರವರ ಪ್ರಕಟಿತ "ಗೋರಿಯೊಳಗೆ ಯಾರು ಶ್ರೇಷ್ಠ" ಕವನ
     ಸಂಕಲನ. 150 ಪುಸ್ತಕ.
2) ಸಮಾಜ ಸೇವಕರು, ದಲಿತ ಬಂಡಾಯ ಸಾಹಿತಿ, ಸೃಜನಶೀಲ ಮನಸ್ಸಿನ ಯುವ ಸಾಹಿತಿ ಆದೂರು ಪ್ರಕಾಶ್ ರವರ
    ಪ್ರಕಟಿತ "ಮೊದಲ ಹೆಜ್ಜೆ " ಕವನ ಸಂಕಲನ. 100 ಪುಸ್ತಕ.
3)  ಯುವ ಸಾಹಿತಿ, ಸಂಘಟಕ, ಬುದ್ದಿಜೀವಿ ಮುರಳಿ ಮೋಹನ ಕಾಟಿ ರವರ ಪ್ರಕಟಿತ "ಮಾರಾಟದ ಶಿಕ್ಷಣ  " ಸಂಕಥನ
     ಸಂಕಲನ. 100 ಪುಸ್ತಕ.
4) ನಿರ್ದೇಶಕ, ಸಾಹಿತಿಗಳಾದ ಗುಡ್ನಹಳ್ಳಿ ಮುನಿರಾಜಪ್ಪನವರ ಪ್ರಕಟಿತ " ಗರೀಬರು " ಕವನ ಸಂಕಲನ. 100 ಪುಸ್ತಕ.
5) ಜಾಗೃತರು, ಅಧ್ಯಯನ ಶೀಲರು, ಬುದ್ದಿಜೀವಿಗಳಾದ ಜಗನ್ನಾಥ ರಾವ್ ಬಹುಳೆಯವರ ಪ್ರಕಟಿತ "ಮುತ್ತಿನ ಹನಿಗಳು "
    ಕವನ ಸಂಕಲನ. 100 ಪುಸ್ತಕ.
6) ಕೃಷಿಕರು, ನಿಸರ್ಗ ಪ್ರಿಯರು, ಸಾಹಿತಿಗಳಾದ ಆನೇಕಲ್  ಕೆ.ಭೈರಪ್ಪ ರವರ ಪ್ರಕಟಿತ " ಅಂತರಂಗದ ಹನಿಗಳು "
    ಕವನ ಸಂಕಲನ 100 ಪುಸ್ತಕ.

ಒಟ್ಟು 650 ಪುಸ್ತಕಗಳನ್ನು ಉಚಿತವಾಗಿ ಉಡುಗೊರೆಯಾಗಿ ನೀಡಿ ಸಾಹಿತಿಗಳನ್ನು ಪರಿಚಯಿಸಲಾಯಿತು.

12) ಚಿತ್ರಾನುಭವ, ನನ್ನ ನಿಮ್ಮಲ್ಲಿ, ಚಿತ್ರಕಲಾ ಪ್ರದರ್ಶನ.

ಆನೇಕಲ್ ನಲ್ಲಿ ವಾಸವಾಗಿರುವ ಕಲಾವಿದರಾದ ಶ್ರೀ ರಾಜೇಶ್ ರವರು ಬೆಂಗಳೂರಿನ ಕಲಾಮಂದಿರ ಕಲಾಶಾಲೆಯಲ್ಲಿ 5 ವರ್ಷಗಳು ಕಲೆಯ ಬಗ್ಗೆ ವ್ಯಾಸಂಗ ಮಾಡಿದ್ದು. ಈಗ ಅವರು ಸ್ವಂತ ಉದ್ದಿಮೆಯಾಗಿ ಪರ್ಲ್ ಗ್ರೂಫ್ ಎಂಬ ಹೆಸರಿನ ಕಂಪನಿಯನ್ನು ಪ್ರಾರಂಭಿಸಿ ಗಾಜಿನ ಕಲೆಯಲ್ಲಿ ತೊಡಗಿದ್ದು. ಅವರು ರಚಿಸಿರುವ ಹಲವಾರು ಚಿತ್ರಗಳನ್ನು ಪ್ರದರ್ಶಿಸುವುದು. ಹಾಗೂ ಕಲ್ಯಾಣೋತ್ಸವದಲ್ಲಿ ಸನ್ಮಾನಿಸುವ ಕವಿ, ಕಲಾವಿದರಿಗೆ ನೇತ್ರದಾನ, ರಕ್ತದಾನದ ಬಗ್ಗೆ ಅರಿವು ಮೂಡಿಸುವ ನೆನಪಿನ ಕಾಣಿಕೆಯನ್ನು ಗಾಜಿನಲ್ಲಿ ತಯಾರಿಸಿ ಉಡುಗೊರೆಯಾಗಿ ನೀಡಲಾಯಿತು.

13) ಕುವೆಂಪು ಪರಿಕಲ್ಪನೆಯ ವಿಶ್ವಮಾನವ ಧರ್ಮದ ಸಪ್ತ ಸೂತ್ರಗಳು, ಎ.ಆರ್. ನಾರಾಯಣಘಟ್ಟ ರವರಿಂದ.

ಶ್ರೀಯುತ ಎ.ಆರ್ ನಾರಾಯಣಘಟ್ಟರವರು ಕಲ್ಯಾಣೋತ್ಸವದಲ್ಲಿ ಭಾಗವಹಿಸಲು ಅಡಚಣೆಯಾಯಿತೆಂದು ಅಂಚೆ ಮುಖೇನ ತಿಳಿಸಿರುವ ಪತ್ರ.
 
ಕಲ್ಯಾಣೋತ್ಸವದ ನಾಮಫಲಕ 
 
ಕಲ್ಯಾಣೋತ್ಸವದ ಕಲ್ಪನೆಗಳು ಒಟ್ಟು ಹದಿಮೂರು

  ಕಲ್ಯಾಣೋತ್ಸವದ ಆಹ್ವಾನ ಪತ್ರಿಕೆಯಲ್ಲಿ  ಜನಜಾಗೃತಿ ಮಾಹಿತಿಗಳು
(ನೇತ್ರದಾನ, ಮಳೆನೀರು ಕೊಯ್ಲು, ವನ್ಯಜೀವಿ ಸಂದೇಶ, ರಕ್ತದಾನ, ಸ್ವಯಂ ವೈದ್ಯ, ಬಾಲವನ ಮಕ್ಕಳ ಮುಂದಿನ ಭವಿಷ್ಯ)


 ಕಲ್ಯಾಣೋತ್ಸವದ ಆಹ್ವಾನ ಪತ್ರಿಕೆ


  ಕಾವ್ಯ-ಗಾನ-ಕುಂಚ ವಿಭಿನ್ನ ಕಾರ್ಯಕ್ರಮದ ಓಡುತಿಟ್ಟ ಚಿತ್ರಣದ ಮುಖಪುಟ

ಕಲ್ಯಾಣೋತ್ಸವದಲ್ಲಿ ಉಡುಗೊರೆ ನೀಡಿದ ಆನೇಕಲ್ ತಾಲ್ಲೂಕಿನ ಸಾಹಿತಿಗಳ ಪ್ರಕಟಿತ ಪುಸ್ತಕಗಳು

 ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದ ಹಿರಿಯರು, ಸಾಹಿತಿಗಳು, ಗಣ್ಯರು, ಕವಿ, ಕಲಾವಿದರು ಹಾಗೂ ಸ್ನೇಹಿತರು.

ಕಲ್ಯಾಣೋತ್ಸವದಲ್ಲಿ ಪ್ರದರ್ಶಿಸಿದ್ದ ಜನಜಾಗೃತಿ ಮಾಹಿತಿ ಫಲಕಗಳು






 
ಕಲ್ಯಾಣೋತ್ಸವದ ನೇತ್ರದಾನ ಬಗ್ಗೆ ಜನಜಾಗೃತಿ ಕರಪತ್ರ
ಕಲ್ಯಾಣೋತ್ಸವದ ಬಗ್ಗೆ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳು
ಸಂಯುಕ್ತ ಕರ್ನಾಟಕ ದಿನ ಪತ್ರಿಕೆ
 ವಿಜಯ ಕರ್ನಾಟಕ ದಿನ ಪತ್ರಿಕೆ
 ಪ್ರಜಾವಾಣಿ ದಿನ ಪತ್ರಿಕೆ
 ಹೊಸದಿಗಂತ ದಿನ ಪತ್ರಿಕೆ
 ವಿಜಯವಾಣಿ ದಿನ ಪತ್ರಿಕೆ

|| ಸಪ್ತಪದಿ ||
ಸಂಸ್ಕೃತ ಶ್ಲೋಕ ಹಾಗೂ ಕನ್ನಡ ಅರ್ಥಗಳು
 
|| ಇಷ ಏಕಪದೀ ಭವಃ ಸಾ ಮಾಮನುವ್ರತಾಭವ ||
ಅನ್ನಕ್ಕಾಗಿ ಮೊದಲನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
|| ಊರ್ಜೇ ದ್ವಿಪದೀ ಭವಃ ಸಾ ಮಾಮನುವ್ರತಾಭವ ||
ಬಲವೃದ್ದಿಗಾಗಿ ಎರಡನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
|| ರಾಯಸ್ಪೋಷಾಯ ತ್ರಿಪದೀ ಭವಃ, ಸಾ ಮಾಮನುವ್ರತಾಭವ ||
ಸಂಪತ್ತಿನ ಅಭಿವೃದ್ಧಿಗಾಗಿ ಮೂರನೇ ಹೆಜ್ಜೆ ಇಡು, ಇದರಲ್ಲಿ ನನ್ನನು ಅನುಸರಿಸು.
|| ವಾಯೋಭವ್ಯಾಯ ಚತುಷ್ಪದೀ ಭವಃ ಸಾ ಮಾಮನುವ್ರತಾಭವ ||
ಮಮತೆಯುಂಟಾಗುವುದಕ್ಕಾಗಿ ನಾಲ್ಕನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
|| ಪ್ರಜಾಭ್ಯಃ ಪಂಚಪದೀ ಭವಃ, ಸಾ ಮಾಮನುವ್ರತಾಭವ ||
ಸುಸಂತಾನ ಪಡೆಯಲು ಐದನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
|| ಋತುಭ್ಯಃ ಷಟ್ಪದೀ ಭವಃ, ಸಾ ಮಾಮನುವ್ರತಾಭವ ||
ಒಳ್ಳೆಯ ಕಾಲಕ್ಕಾಗಿ ಆರನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.
|| ಸಖಾ ಸಪ್ತಪದೀ ಭವಃ, ಸಾ ಮಾಮನುವ್ರತಾಭವ ||
ಪರಸ್ಪರ ಸ್ನೇಹಕ್ಕಾಗಿ ಏಳನೇ ಹೆಜ್ಜೆ ಇಡು, ಇದರಲ್ಲಿ ನನ್ನನ್ನು ಅನುಸರಿಸು.

 *******************


ಕಲ್ಯಾಣೋತ್ಸವ ಛಾಯಾಚಿತ್ರಗಳು